ಶುಕ್ರ 1

	ಸೌರವ್ಯೂಹದಲ್ಲಿ ಸೂರ್ಯನಿಂದ ತೊಡಗಿ ಎರಡನೆಯ ಗ್ರಹ (ವೀನಸ್), ಮೊದಲನೆಯದು ಬುಧ. ಗೋಚರ 5 ಗ್ರಹಗಳ ಪೈಕಿ ಇದು ಉಜ್ಜ್ವಲತಮ. ಬೆಳ್ಳಿ, ಚುಕ್ಕಿ ಎಂಬ ಹೆಸರುಗಳಿಂದ ಜನಪದ ಲೋಕದಲ್ಲಿ ಪರಿಚಿತ. ಸೂರ್ಯೋದಯಕ್ಕೆ ಮೊದಲು ಕೆಲವು ಗಂಟೆ ಪೂರ್ವಾಕಾಶದಲ್ಲಿ ಅಥವಾ ಸೂರ್ಯಾಸ್ತದ ಬಳಿಕ ಕೆಲವು ಗಂಟೆ ಪಶ್ಚಿಮಾಕಾಶದಲ್ಲಿ ಮಾತ್ರ ಕಾಣುತ್ತದೆ. ಐರೋಪ್ಯರು ಇದನ್ನು ಬೇರೆಬೇರೆ ತಾರೆ ಎಂದು ಭಾವಿಸಿ ಮುಂಜಾನೆಯ ತಾರೆ (ಮಾರ್ನಿಂಗ್ ಸ್ಟಾರ್) ಮತ್ತು ಸಂಜೆಯತಾರೆ (ಈವ್ನಿಂಗ್ ಸ್ಟಾರ್) ಎಂದು ಕರೆದಿದ್ದರು. ಮೂಲ ಹೆಸರುಗಳು ಫಾಸ್ಫರಸ್ ಮತ್ತು ಹೆಸ್ಫರಸ್. ದೀರ್ಘ ಅಧ್ಯಯನಾನಂತರ ಇವೆರಡೂ ಒಂದರ ಎರಡು ಅವತಾರಗಳೆಂಬ ತಥ್ಯ ಅರಿವಿಗೆ ಬಂದಿತು. ಸೌಂದರ್ಯದೇವತೆ ಅಫ್ರಡೈಟ್‍ಳ ಹೆಸರು ಇದಕ್ಕಿತ್ತು. ಇದನ್ನು ರೋಮನ್ನರು ವೀನಸ್ ಎಂದು ಬದಲಿಸಿಕೊಂಡರು. 

	ಟಾಲೆಮಿಯ (ಸು. 90-168) ಭೂಕೇಂದ್ರವಾದವನ್ನು ನೇಪಥ್ಯಕ್ಕೆ ಸರಿಸುವಲ್ಲಿ ಶುಕ್ರ ಮುಖ್ಯಪಾತ್ರ ವಹಿಸಿತು: ಶುಕ್ರಸಂಕ್ರಮಣದ ವೀಕ್ಷಣೆ, ಅದರ ಕಲೆಗಳು, ದೂರದರ್ಶಕದ ಮೂಲಕ ನೋಡಿದಾಗ ಕಲೆಗಳೊಡನೆ ಗ್ರಹದ ಕೋನೀಯಗಾತ್ರವೂ ವ್ಯತ್ಯಾಸವಾಗುವುದು ತಿಳಿಯುತ್ತದೆ. ಈ ವೈರುಧ್ಯವನ್ನು ವಿವರಿಸುವುದು ಭೂಕೇಂದ್ರವಾದದಿಂದ ಸಾಧ್ಯವಾಗಲಿಲ್ಲ; ಸೌರಕೇಂದ್ರವಾದ ಸಮರ್ಪಕವಾಗಿ ವಿವರಿಸಿತು. 

	ಆಂತರಿಕ ರಚನೆ: ಶುಕ್ರದ ವ್ಯಾಸ ಭೂಮಿಯ 0-95ರಷ್ಟು; ರಾಶಿ 0.81ರಷ್ಟು. ಆದ್ದರಿಂದ ಶುಕ್ರದ ಮೇಲೆ ನಮ್ಮ ತೂಕದ ಅನುಭವದಲ್ಲಿ ವಿಶೇಷ ವ್ಯತ್ಯಾಸ ಆಗುವುದಿಲ್ಲ. ಯಾವಾಗಲೂ ಮೋಡಗಳಿಂದ ಮುಚ್ಚಿರುವ ಗ್ರಹದ ಮೇಲ್ಮೈ ಮತ್ತು ಆಂತರಿಕ ರಚನೆ ತಿಳಿಯಲು 1970ರ ತನಕವೂ ಕಾಯಬೇಕಾಯಿತು. ಅದರ ದಟ್ಟ ವಾತಾವರಣದಲ್ಲಿ ಕಾರ್ಬನ್‍ಡೈಆಕ್ಸೈಡ್ ಹೆಚ್ಚಾಗಿದೆ. ಸ್ವಲ್ಪ ಪ್ರಮಾಣದಲ್ಲಿ ನೈಟ್ರೊಜನ್ ಮತ್ತು ಆಕ್ಸಿಜನ್ ಕೂಡ ಇವೆ. ದಟ್ಟ ವಾತಾವರಣ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದ್ದರಿಂದ ಹಗಲಾಗಲೀ ಇರುಳಾಗಲೀ ಉಷ್ಣತೆ ಯಲ್ಲಿ ವ್ಯತ್ಯಾಸವಾಗದು. ವಾತಾವರಣದ ಒಟ್ಟು ಭಾರ ಭೂಮಿಯದಕ್ಕಿಂತ 90 ಮಡಿ ಹೆಚ್ಚು. ಆದ್ದರಿಂದ ಒತ್ತಡವೂ ಹೆಚ್ಚು. ಶುಕ್ರದ ಆವರ್ತನಾವಧಿ 223 ದಿನಗಳು; ಪರಿಭ್ರಮಣಾವಧಿ 244 ದಿನಗಳು (ಎಂದೇ ಅದರ ಒಂದು ದಿವಸ ಒಂದು ವರ್ಷದಷ್ಟೇ ಅವಧಿಯದು!). ಈ ನಿಧಾನ ಆವರ್ತನೆಯ ಕಾರಣ ಅದು ಬಹುತೇಕ ಗೋಳಾಕಾರವನ್ನೇ ಉಳಿಸಿ ಕೊಂಡಿದೆ. ಶುಕ್ರದ ಮೋಡಗಳ ಬಣ್ಣ ಹಳದಿ; ಅಲ್ಲಿ ಸಲ್ಫ್ಯೂರಿಕ್ ಆಮ್ಲ ಅಧಿಕ. ಮೋಡಗಳ ರಚನೆಯ ವ್ಯತ್ಯಾಸವನ್ನು ಅಭ್ಯಸಿಸಿ ಗಂಟೆಗೆ 360 ಕಿಮೀ ವೇಗದಲ್ಲಿ ಅವು ಚಲಿಸುತ್ತವೆ ಎಂದು ತಿಳಿಯಬಹುದು. ಹರಿನ್ಮಂದಿರ ಪರಿಣಾಮ (ಗ್ರೀನ್‍ಹೌಸ್ ಇಫೆಕ್ಟ್) ಯಾವ ಬಗೆಯ ಮಿತಿಯನ್ನು ಮುಟ್ಟಬಲ್ಲುದು ಎಂಬುದಕ್ಕೆ ಶುಕ್ರ ಅತ್ಯುತ್ತಮ ಉದಾಹರಣೆ. ಇದೇ ಪರಿಣಾಮ ಭೂಮಿಯ ಮೇಲೆ ಹಿತಕರಾನುಭವ ಎಂಬುದನ್ನು ಗಮನಿಸಬೇಕು.

	ಶುಕ್ರದ ಮೇಲೆ ಇಳಿದಿರುವ ಕೆಲವು ಉಪಕರಣಗಳಿಂದ ಅಲ್ಲಿಯ ವಾತಾವರಣ ಹಾಗೂ ನೆಲದ ಬಗ್ಗೆ ಸಾಕಷ್ಟು ಅಂಕಿಅಂಶಗಳು ದೊರೆತಿವೆ. ವಾತಾವರಣದ ಹೊರವಲಯದಲ್ಲಿ ಸು. -1700 ಸೆ ಇರುವ ಉಷ್ಣತೆ ನೆಲದತ್ತ ಇಳಿದಂತೆ ಹೆಚ್ಚತೊಡಗುತ್ತದೆ. ನೆಲದಲ್ಲಿ ಇದು ಸು. 5500 ಸೆ.  

	ವಾತಾವರಣದಲ್ಲಿ ರಾಸಾಯನಿಕ ಕ್ರಿಯೆಗಳು ಸತತವಾಗಿ ಜರಗುತ್ತಲೇ ಇರುವುವು. ಹೊರವಲಯದಲ್ಲಿ ಸೌರಕಿರಣಗಳೇ ಈ ಕ್ರಿಯೆಗಳನ್ನು ನಡೆಸುತ್ತವೆ. ಕೆಳಗೆ ಇಳಿದಂತೆ ಉಷ್ಣತೆ ಹೆಚ್ಚಿರುವ ಕಾರಣ ಆ ಕ್ರಿಯೆಗಳು ಮುಂದುವರಿಯುತ್ತಿರುತ್ತವೆ. ಸಲ್ಫರ್ ಮತ್ತು ಸಲ್ಫರ್ ಡೈಆಕ್ಸೈಡ್‍ನ್ನು ವಾತಾವರಣಕ್ಕೆ ಅಗ್ನಿಪರ್ವತಗಳು ಉಗುಳುತ್ತವೆ. ಮಳೆನೀರಿನ ಬದಲು ಸಲ್ಫ್ಯೂರಿಕ್ ಆಮ್ಲ ವರ್ಷಗರೆಯಬಹುದು. ಆದರೆ ನೆಲ ಮುಟ್ಟುವ ಮೊದಲೇ ಅದು ಆವಿಯಾಗಿಬಿಡಬಹುದು. ವೇಗಾ-1 ಮತ್ತು ವೇಗಾ-2 ಎಂಬ ಎರಡು ನೌಕೆಗಳು 1985ರಲ್ಲಿ ಶುಕ್ರದಮೇಲೆ ಉಪಕರಣಗಳನ್ನು ಇಳಿಸಿದುವು. ಅಲ್ಲಿ ಡ್ಯುಟೀರಿಯಮ್‍ನ್ನು ಗುರುತಿಸಿರುವುದರಿಂದ ಬಹುಶಃ ಹಿಂದೆ ಸಾಗರಗಳಿದ್ದಿರಬೇಕು ಎಂದು ಊಹಿಸಲಾಗಿದೆ. ಶುಕ್ರದ ಆವರ್ತನಾಕ್ಷ ಗ್ರಹದ ವಿಷುವದ್ವøತ್ತ ತಲಕ್ಕೆ  ಓರೆಯಾಗಿರದ ಕಾರಣ ಈ ಗ್ರಹದಲ್ಲಿ ಋತುಭೇದಗಳಿಗೆ ಒಣಋತುಗಳಿಗೆ ಅವಕಾಶವಿಲ್ಲ. ಮೇಲ್ಮೈಯಲ್ಲಿ ಕುಳಿಗಳೂ ಹೆಚ್ಚಿಲ್ಲ. ಇವನ್ನು ಸೃಷ್ಟಿಸುವ ಆಘಾತಗಳು ಅಷ್ಟೇನೂ ಪರಿಣಾಮಕಾರಿ ಆಗಿಲ್ಲದಿರಬಹುದು ಎಂಬುದೊಂದು ಊಹೆ. ದಟ್ಟ ವಾತಾವರಣ ಅದನ್ನು ಸುಟ್ಟುಹಾಕಿರ ಬಹುದು ಅಥವಾ ವೇಗವನ್ನು ತೀರ ಕಡಿಮೆಗೊಳಿಸಿರಬಹುದು. ಭೂಮಿಯಂತೆ ಶುಕ್ರದ ಮೇಲ್ಮೈಯೂ ಚಿಪ್ಪುಗಳಿಂದಾಗಿರಬಹುದೆಂಬುದು ಒಂದು ವಾದ. ಇದರಿಂದಲೇ ನೆರಿಗೆಗಳು ಏರ್ಪಟ್ಟು ಹಿಮಾಲಯದಂಥ ದೊಡ್ಡ ಪರ್ವತಶ್ರೇಣಿಗಳುಂಟಾಗಿವೆ. ಇತ್ತೀಚೆಗೆ ಲಾವಾ ಹರಿದು ಘನೀಭವಿಸಿರುವುದನ್ನು ವೆನೆಲಾ ಮತ್ತು ಮೆಗೆಲಾನ್ ನೌಕೆಗಳು ತೋರಿಸಿ ಕೊಟ್ಟಿವೆ. ಗ್ರಹದ ಮೇಲಿಳಿಸಿದ ಉಪಕರಣಗಳು ಅಲ್ಲಿ ಕಾಂತಕ್ಷೇತ್ರ ಬಲು ಕಡಿಮೆ ಎಂದು ತೋರಿಸಿವೆ. ಇದಕ್ಕೂ ಶುಕ್ರದ ಆವರ್ತನೆ ನಿಧಾನವಾಗಿರುವುದಕ್ಕೂ (243 ದಿನಗಳು) ಸಂಬಂಧ ಇರಬಹುದೆಂದು ಊಹಿಸಲಾಗಿದೆ. ಮೇಲ್ಮೈಯಲ್ಲಿರುವ ಬೆಟ್ಟಗಳ ಸಾಲು, ಕಣಿವೆ,  ಸಾಗರ, ಬಯಲುಗಳಿಗೆ ವಿವಿಧ ಜನಾಂಗಗಳ ಸ್ತ್ರೀದೇವತೆಗಳ ಹೆಸರುಗಳನ್ನು ಇರಿಸಲಾಗಿದೆ. ವಿಶಾಲ ಬಯಲೊಂದಕ್ಕೆ ಲಕ್ಷ್ಮೀಪ್ಲಾನಂ ಎಂಬ ಹೆಸರುಂಟು.

          ಅಂಕಿಅಂಶಗಳು
ರಾಶಿ			...	...	4.869 x 1024 ಕಿಗ್ರಾಮ್
ವ್ಯಾಸ			...	...	 12,104 ಕಿಮೀ
ಸಾಚಿದ್ರತೆ			...	...	5.243 ಗ್ರಾಮ್/ಸೆ3 
ಸೂರ್ಯನಿಂದ ಸರಾಸರಿ 	...	...	108,200,000 ಕಿಮೀ
ದೂರ
ಆವರ್ತನಾವಧಿ		...	...	224.7 ಭೂದಿವಸಗಳು
ಪರಿಭ್ರಮಣಾವಧಿ		...	...	243.02 ಭೂದಿವಸಗಳು
ಸರಾಸರಿ ಕಕ್ಷಾವೇಗ		...	...	35 ಕಿಮೀ/ಸೆ
ಕಕ್ಷೆಯ ಉತ್ಕೇಂದ್ರತೆ	...	...	0.0068
ಕಕ್ಷಾತಲದ ಬಾಗು		...	...	177.40 
ವಿಮೋಚನಾ ವೇಗ		...	...	10.36 ಕಿಮೀ/ಸೆ
ಮೇಲ್ಮೈ ಉಷ್ಣತೆ		...	...    	4820 ಸೆ.
ವಾತಾವರಣದ ಒತ್ತಡ	...	...	92 ಬಾರ್			
	  (ಎಸ್.ಎಚ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ